ಅರಗು

	ಒಂದು ಜಾತಿಯ ಹೆಣ್ಣುಕೀಟಗಳು (ಐಚಿಛಿಛಿiಜಿeಡಿ ಟಚಿಛಿಛಿಚಿ) ಸ್ರವಿಸುವ ದ್ರವ ಗಟ್ಟಿಯಾಗಿ ಇಂಟಾದ ಹೊಪಪೊರೆಗೆ (ಇನ್‍ಕ್ರಸ್‍ಟೇಷನ್) ಈ ಹೆಸರಿದೆ (ಲ್ಯಾಕ್). ಇಂಗ್ಲಿಷ್ ಪದ ಲ್ಯಾಕ್, ಲಕ್ಷ ಎಂಬ ಸಂಖ್ಯೆಯ ಸೂಚಕವಾಗಿದ್ದು ಲಕ್ಷಾಂತರ ಕೀಟಗಳ ಮೇಳ ಎಂಬರ್ಥದಿಂದ ಬಂದಿದೆ. ಇದು ಒಂದು ರಾಳ. ಪೋಷಣೆ ಮತ್ತು ತಾಯ್ತನಗಳು ಹೊರತು ಜೀವನದಲ್ಲಿ ಬೇರೆ ಯಾವ ಆಕಾಂಕ್ಷೆಯೂ ಇಲ್ಲದ ಈ ಹೆಣ್ಣುಕೀಟಗಳ ಚರ್ಮದಲ್ಲಿ ಅಥವಾ ಚರ್ಮದ ಮೇಲುಭಾಗದಲ್ಲಿರುವ ಸ್ರಾವಕಗ್ರಂಥಿಗಳಿಂದ ಜಿನುಗುತ್ತದೆ. ಹೀಗೆ ಉತ್ಪನ್ನವಾದ ಅರಗನ್ನು ಮಾನವ ತೆಗೆದು ತನ್ನ ಅನೇಕ ಅಪೇಕ್ಷಿತ ಔದ್ಯೋಗಿಕ ಕಾರ್ಯಗಳಿಗೆ ಬಳಸಿಕೊಳ್ಳುತ್ತಾನೆ. ಈ ಗಟ್ಟಿಪದರ ಕಡ್ಡಿಗಳ ಮೇಲೆ ಬೆಳೆಯುವುದು. ಕಡ್ಡಿಗಳ ಮೇಲಿನಿಂದ ಹೊರತೆಗೆದ ಅರಗನ್ನು ಅಂಟು ಅರಗು (ಸ್ಟಿಕ್‍ಲ್ಯಾಕ್) ಎನ್ನುವರು. ಇದರಲ್ಲಿರುವ ಕಡ್ಡಿ ಮತ್ತು ರಾಳ ಪದಾರ್ಥಗಳನ್ನು ಪ್ರತ್ಯೇಕಿಸಿದ ಅನಂತರ ಇದನ್ನು ಅರ್ಧಗೋಳಾಕಾರದ ತೊಟ್ಟಿಗಳಲ್ಲಿ ತೊಳೆಯುತ್ತಾರೆ. ಮುಂದೆ ಕಡಾಯಿಗಳಲ್ಲಿ ಕರಗಿಸಿ ಶೋಧಿಸಿದ ಮೇಲೆ ಕೈಕೆಲಸದಿಂದಲೇ ಚಕ್ಕೆಯ ಆಕಾರಕ್ಕೆ ರೂಪಿಸುತ್ತಾರೆ.

	ಕೈಗಾರಿಕೆಗಳಲ್ಲಿ ಅರಗಿನ ಉಪಯೋಗ ಹಲವಾರು : (1) ಗ್ರಾಮಫೋನ್ ತಟ್ಟೆಗಳ ತಯಾರಿಕೆ ; (2) ಸಂದುಮುಚ್ಚುವ ಸಿಮೆಂಟಿನ ತಯಾರಿಕೆ ಮತ್ತು ಲೋಹಗಳನ್ನು ಅಲೋಹಗಳೊಡನೆ ಬೆಸೆಯುವಿಕೆ ; (3) ಫ್ರೆಂಚ್ ಮೆರುಗೆಣ್ಣೆ ಎಂದು ಕರೆಯುವ ಅನೇಕ ಮೆರುಗೆಣ್ಣೆಗಳ ತಯಾರಿಕೆ ; (4) ವಿದ್ಯುನ್ನಿರೋಧಕ ಮೆರುಗೆಣ್ಣೆಯ ತಯಾರಿಕೆ ; (5) ಮೊಹರಿನ ಮೇಣದ ತಯಾರಿಕೆ ; (6) ಪೆಟ್ರೋಲ್ ನಿರೋಧಕ ವಸ್ತುವಾಗಿ ಮತ್ತು ಸಾಮಾನ್ಯವಾಗಿ ಘರ್ಷಣೆ ಕಡಿಮೆ ಮಾಡಲು ಉಪಯೋಗಿಸುವ ಮೃದುಚಾಲಕ ತೈಲಗಳು, ಜಿಡ್ಡುಗಳು, ಕೊಬ್ಬುಗಳು ಇವುಗಳ ವರ್ತನೆಗಳನ್ನು ನಿರೋಧಿಸುವ ಲೇಪನಗಳ ತಯಾರಿಕೆ ; (7) ಮದ್ಯಸಾರದಲ್ಲಿ ಕರಗಿಸಿ ಬಂದ ಮಿಶ್ರಣಕ್ಕೆ ಅನುಕೂಲವಾದ ಬಣ್ಣ ಸೇರಿಸಿ ಅರಗಿನ ಮೆರುಗನ್ನು ತಯಾರಿಸಿ ಲೋಹಪದಾರ್ಥಗಳಿಗೆ ಬಣ್ಣಕಟ್ಟಲು ಶುದ್ಧ ಅರಗಿನ ಬಳಸಿಕೆ.

	ಈ ಶತಮಾನದ ಆರಂಭದಲ್ಲಿ ಗ್ರಾಮಫೋನಿನ ತಟ್ಟೆಗಳ ತಯಾರಿಕೆಗಾಗಿಯೇ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಅರಗನ್ನು ಬಳಸಲಾಗುತ್ತಿತ್ತು. ಈಚೆಗೆ ಅರಗಿನ ಬದಲು ಇತರ ಸಂಶ್ಲೇಷಿತ ರಾಳಗಳು ಬಂದು ಅರಗನ್ನು ಈ ಕ್ಷೇತ್ರದಿಂದ ತಳ್ಳಿ ಹಾಕಿವೆ. ಇದೇ ಕಾರಣದಿಂದ ಎಲ್ಲೋ ಕೆಲವು ಸಂದರ್ಭಗಳಲ್ಲಿ ಮಾತ್ರ ಅರಗನ್ನು ವಿದ್ಯುನ್ನಿರೋಧಕ ಮೆರುಗೆಣ್ಣೆಯ ಉತ್ಪಾದನೆಯಲ್ಲಿ ಬಳಸುವರು. ಮರಗೆಲಸದ ಉದ್ಯೋಗದಲ್ಲಿ ಅರಗನ್ನು ಇನ್ನೂ ಬೃಹತ್ ಪ್ರಮಾಣದಲ್ಲಿ ಉಪಯೋಗಿಸಲಾಗುತ್ತಿದ್ದು, ಇನ್ನು ಮುಂದಿನ ಅನೇಕ ವರ್ಷಗಳಲ್ಲಿ ಇದರ ಉಪಯೋಗ ಇದೇ ಮಟ್ಟದಲ್ಲಿ ಮುಂದುವರಿಯಬಹುದು. ಮೆರುಗೆಣ್ಣೆಯ ಉಪಯೋಗ ಮತ್ತು ಮರಗೆಲಸಕ್ಕೆ ನಾಜೂಕಾದ ಪೂರ್ಣತೆಯನ್ನು ಕೊಡುವ ಎರಡು ಕಾರ್ಯಗಳು ಕಷ್ಟಕರ. ಉತ್ತಮವಾದ ಅಂತ್ಯಮೆರುಗನ್ನು ಬೇರೆ ವಿಧಗಳಿಂದ ಕೊಡಲು ಹೆಚ್ಚಿನ ಪ್ರಯತ್ನಗಳು ನಡೆಯುತ್ತಿದ್ದರೂ ಅರಗು ಮೆರುಗೆಣ್ಣೆಯನ್ನು ಮರದ ಸಾಮಾನುಗಳಿಗೆ ಉಪಯೋಗಿಸುವುದರ ಪ್ರಾಮುಖ್ಯತೆಗೆ ಕುಂದುಬಂದಿಲ್ಲ. ಸ್ವಲ್ಪಮಟ್ಟಿಗೆ ಅರಗನ್ನು ಸಂದಿಮುಚ್ಚುವ ಸಿಮೆಂಟ್ ತಯಾರಿಸಲೂ ಲೋಹಗಳನ್ನು ಲೋಹಗಳ ಮತ್ತು ಅಲೋಹಗಳ ಜೊತೆ ಸೇರಿಸಲು ಅಗತ್ಯವಾದ ಬಂಧಕ ಸಿಮೆಂಟಿನ ತಯಾರಿಕೆಯಲ್ಲೂ ಉಪಯೋಗಿಸುತ್ತಾರೆ. ಒಟ್ಟಿನಲ್ಲಿ ಯಾವೆರಡು ಪದಾರ್ಥಗಳನ್ನೂ ಒಂದರೊಡನೊಂದು ಜೊತೆಗೂಡಿಸಲೂ ಇದನ್ನು ಉಪಯೋಗಿಸಬಹುದು. ತಾಮ್ರ, ಸೀಸ ಹಾಗೂ ಇತರ ಭಾರವಾದ ಲೋಹಗಳನ್ನು ಜೊತೆಗೂಡಿಸುವ ಅರಗಿನ ಸಂಲಗ್ನತ್ವ ಗುಣ (ಅಡ್ಹೆಸಿವ್ ಪವರ್) ಬಹಳ ಉಪಯುಕ್ತ. ಸಂಲಗ್ನತೆ ಎಲ್ಲಿ ಪ್ರಥಮ ಅಪೇಕ್ಷ್ಯಗುಣವೋ ಅಲ್ಲೆಲ್ಲ ಅರಗಿಗೆ ಈಗಲೂ ಆದ್ಯಸ್ಥಾನವಿದೆ.

	ಅರಗು ಬಣ್ಣ : ಭಾರತ ಮತ್ತು ಪರ್ಷಿಯ ದೇಶಗಳಲ್ಲಿ ಹೊಳಪಾದ ಕೆಂಪು, ಕೇಸರಿಬಣ್ಣಗಳನ್ನು ಉಣ್ಣೆಯ ಮೇಲೆ ತರಲು ಅರಗುಬಣ್ಣವನ್ನು ವಿಶೇಷವಾಗಿ ಉಪಯೋಗಿಸುತ್ತಿದ್ದರು. ಬ್ರಿಟನ್ನಿನಲ್ಲಿ ಈ ಬಣ್ಣ ಬಳಕೆಗೆ ಬಂದದ್ದು (18)ನೆಯ ಶತಮಾನದ ಕೊನೆಯಲ್ಲಿ. ಅರಗುಬಣ್ಣ ತಯಾರಿಕೆ ಒಂದು ಕಾಲಕ್ಕೆ ಪ್ರಮುಖ ಉದ್ಯಮವಾಗಿತ್ತು. ಷೆಲ್‍ಲ್ಯಾಕ್ ಅದರ ಒಂದು ಉಪೋತ್ಪನ್ನ.
(ಎನ್.ಕೆ.ಆರ್.; ವಿ.ಎಸ್.ವಿ.; ಕೆ.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ